Tuesday, May 13, 2008


ಕುಮಾರ ಪರ್ವತಕ್ಕೆ ತೀರ್ಥಯಾತ್ರೆ...ಭಾಗ ೧(ಸೋಮವಾರ ಪೇಟೆ)

ನಾಗೇಶ ಅಲಿಯಾಸ್ ಅಣ್ಣ ಅವರ ಸಾರಥ್ಯದಲ್ಲಿ ಕುಮಾರಪರ್ವತಾರೋಹಣದ ಕಾರ್ಯಕ್ರಮ ಪಕ್ಕ ಆಯ್ತು. ಬಹಳ ದಿನದ ನಂತರ ನಮ್ಮ ಬಾಯ್ಸ್ ಎಲ್ಲಾ ಸೇರಿ ಒಂದು ಕಡೆ ಹೊರಟಿದ್ವಿ. ಒಟ್ಟು ಹದಿಮೂರು ಜನ.. ನಾಗೇಶ್ ಅಲಿಯಾಸ್ ಅಣ್ಣ, ಅರುಣ್ ಅಲಿಯಾಸ್ ಲಾಲ್, ಸಂದೀಪ್ ಅಲಿಯಾಸ್ ಸ್ಯಾಂಡಿ, ಪೂರ್ಣೇಶ್ ಕಾಲ್ ಮಿ ಎಸ್ ಪೂರ್ಣಿ ಪೂರ್ಣಿ ಗೆಳೆಯ ಹರ್ಷ,ವಿಕ್ರಮ್ ಅಲಿಯಾಸ್ ವಿಕ್ಕಿ,ವಿಕ್ಕಿ ಗೆಳೆಯ ಪ್ರದೀಪ್, ಕಾರ್ವಿ ಅಲಿಯಾಸ್ ಫಾಸ್ಟ್ ಫರ್ನಾಂಡೀಸ್,ವತ್ಸ, ನಾಗಿ ಚಡ್ಡಿ ದೋಸ್ತ್ ಮಂಜ,ಮನು,ಮತ್ತೆ ಆನಂದ್.

ನಮ್ಮ ಯೋಜನೆ ಸೊಮವಾರ ಪೇಟೆಯಿಂದ ಗುಡ್ಡ ಹತ್ತಿ ಅಲ್ಲಿ ಒಂದು ರಾತ್ರಿ ಗುಡಾರ ಹೂಡಿ ಮಾರನೆಯದಿನ ಬೆಳಗ್ಗೆ ಪರ್ವತ ಅವಹರಣ ಮಾಡೋದು. ಶುಕ್ರವಾರ ಬೇಗ ಕಛೇರಿಯಿಂದ ಬಂದು ಯಾತ್ರೆಯ ತಯಾರಿ ಮಾಡಿದ್ದಾಯ್ತು. ರಾತ್ರಿ ೧೧ ಘಂಟೆಗೆ ರಾಜ(ನಾಗರಾಜ ;-)) ಹಂಸದಲ್ಲಿ ಕೆಂಪೇಗೌಡ ವಾಹನ ನಿಲ್ದಾಣದಿಂದ ನಮ್ಮ ಪ್ರಯಾಣ ಶುರು ಆಯ್ತು. ನಾನು (ದುರ್) ಅದೃಷ್ಟವಶಾತ್ ನಾನು ನಾಗಿ ಒಂದೇ ಸೀಟು. ನಮಗೆ ಬ್ಲೇಡ್ ಹಾಕೋಕ್ಕೆ ಟಾಪಿಕ್ ಬೇಕಾಗಿಲ್ಲ. ಹಂಗೇ ಅದೂ ಇದೂ ಮಾತಾಡ್ಕೊಂಡು ಮಲ್ಕೊಳ್ಳೋಷ್ಟರಲ್ಲಿ ೧.೩೦. ಬಸ್ ಚೆನ್ನರಾಯ ಪಟ್ಟಣ ಮುಟ್ಟಿದ ಹೊತ್ತಿಗೆ ಮಂಜನ ಕಾಲ್ ಬಂತು, ತೀರ್ಥ ಹಿಡ್ಕೊಂಡು ಹೊಳೇನರಸೀಪುರದಲ್ಲಿ ಕಾಯ್ತಾ ಇದೀನಿ ಅಂತ( ಚುನಾವಣೆಯ ಕೃಪೆಯಿಂದ ಬೆಂಗ್ಳೂರಿನ ಎಲ್ಲಾ ತಿರ್ಥ ವಿತರಣಾ ಕೇಂದ್ರವನ್ನೂ ಮುಚ್ಚಲಾಗಿತ್ತು).ನಾವು ಮುಂಗಡ ಚೀಟಿ ಮಾಡ್ಸಿದ್ದು ೧೧ ಜನಕ್ಕೆ ಈಗ ಇಬ್ರನ್ನ ಅಡ್ಜಸ್ಟ್ ಮಾಡ್ಬೇಕಿತ್ತು. ಹಂಗೂ ಹಿಂಗೂ ಸೀಟ್ ಅಡ್ಜಸ್ಟ್ ಮಾಡ್ಕೊಂಡು ಬೆಳಗ್ಗೆ ೬ ಘಂಟೆ ಅಷ್ಟೊತ್ತಿಗೆ ಸೋಮವಾರ ಪೇಟೆ ಸೇರ್ಕೊಂಡ್ವಿ. ಇನ್ನಾ ಲಾಲ್ ಮತ್ತೆ ವತ್ಸ ಬರ್ಬೇಕಿತ್ತು. ಅವರ ಬಸ್ ಬಂದಾಗ ೭ ಘಂಟೆ.

Monday, September 17, 2007


ಕೊಂಕಣ ರೇಲ್ವೆ ಮೂಡಗಣಪತಿಯ ಹತ್ತ್ರ.....




Thursday, July 05, 2007

ಆಯಿ ಮದ್ದು...

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ವಾತಾವರಣನೇ ಒಂಥರಾ ಆಗೋಗ್ಬಿಟ್ಟಿದೆ. ರಾಜಕಾರಣಿಗಳ ಜತೆ ಇರೋ ಈ ಪರಿಸರಾನೂ ಅವರ ಥರಾನೇ ಆಗೋಗ್ಬಿಟ್ಟಿದೆ ಮೋಡ ಮಳೆ ಸುರಿಸ್ತೀನಿ ಅಂತ ಆಶ್ವಾಸನೆ ಕೊಡ್ತಾ ಇದೆಯೇ ಹೊರ್ತು ತೊಟ್ಟೂ ಹನಿಸಿಲ್ಲ ಇನ್ನ. ಸಹ-ವಾಸ ದೊಷ ಇರ್ಬೇಕು... ಈ ಥರಾ ವಾತಾವರಣ ಇದ್ರೆ ಕೆಮ್ಮು ಜ್ವರ ನೆಗ್ಡಿಗಳಿಗೆ ಹಬ್ಬ ಅಲ್ವ. ನಮ್ಮ ಕಛೇರಿಯಲ್ಲಂತೂ ಆಸ್ಟ್ರೇಲಿಯಾ ಎದ್ರುಗಡೆ ಆಡ್ತಾ ಇರೋ ನಮ್ಮ ಪ್ಲೇಯರ್ಗಳ ಥರ ಒಬ್ರಾದ ಮೇಲೆ ಒಬ್ರು ಈ ಜ್ವರಕ್ಕೆ ಬಲಿ ಆಗ್ತಾನೇ ಇದಾರೆ. ಇವತ್ತು ನೋಡಿದ್ರೆ ನಮ್ಮ ಕಾಟ್ಪಾಡಿ ಟೀಮ್ ಲೀಡ್ ಕರ್ಛೀಫ್ ಹಿಡ್ಕೊಂಡು ಕೂತಿದ್ದ. ಆಗ ನಂಗೆ ನೆನ್ಪಾದದ್ದು ನಮ್ಮನೆ ಡಾಕ್ಟರ್ ವಿಜಯಲಕ್ಷ್ಮಿ ಲಕ್ಷ್ಮೀನಾರಯಣ ಭಟ್ರದ್ದು (ನನ್ನಮ್ಮ :-)). ಇಲ್ಲಿ ಕೆಲ ನೆಗಡಿ ಔಷಧಿಗಳನ್ನ ಹಂಚಿಕೊಳ್ಳಬಯಸ್ತೇನೆ..

೧. ನಿಂಬೇ ಹಣ್ಣಿನ ಕಷಾಯ:
ಬೇಕಾದ ಪದಾರ್ಥಗಳು: ಲಿಂಬೇ ಹಣ್ಣು ೨, ಜೀರಿಗೆ ೩ ಚಮಚ,ಮೆಣಸಿನಕಾಳು(ಬೇಕಾದಲ್ಲಿ) ೨ ರಿಂದ ೩, ತುಳಸಿ (ಇದ್ದಲ್ಲಿ) ಸ್ವಲ್ಪ, ಉಪ್ಪು ಇಲ್ಲವೇ ಕಲ್ಲು ಸಕ್ಕರೆ ರುಚಿಗೆ.

ಮಾಡುವ ವಿಧಾನ: ಒಂದು ಪಾತ್ರದಲ್ಲಿ ಮೂರು ಲೋಟ ನೀರು ಹಾಕಿ. ನಿಂಬೇಹಣ್ಣನ್ನು ಕತ್ತರಿಸಿ ಅದರಲ್ಲಿ ಹಾಕಿ ಉಳಿದೆಲ್ಲ ಪದಾರ್ಥಗಳನ್ನೂ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಯಲು ಬಿಡಿ. ನೀರು ಸರಿ ಸುಮಾರು ಅರ್ಧ ಆಗುವ ವರೆಗೂ ಕುದಿಸಿ.
ಇದನ್ನು ಬಿಸಿ ಬಿಸಿಯಾಗೇ ಕುಡಿದರೆ ಉತ್ತಮ.

ಇದು ದಿನಕ್ಕೆ ೩ ಇಲ್ಲ ೪ ಬಾರಿ ಕುಡಿದರೆ ನೆಗಡಿ ಜ್ವರ ಕಡಿಮೆಯಾಗುತ್ತೆ. ನನ್ನಮ್ಮನ ಸ್ಟೈಲ್ ಅಲ್ಲಿ ಹೇಳೋದಾದ್ರೆ ರಾಮ ಬಾಣ. ಇದರಿಂದ ಬಾಯಿ ಇಛ್ಛೆನೂ ಆಗುತ್ತೆ.

೨. ಅರಿಷಿಣದ ಕಾಫಿ:

ಬೇಕಾದ ಪದಾರ್ಥಗಳು: ಅರಿಷಿಣ ಅರ್ಧ ಚಮಚ, ಬಿಸಿ ಹಾಲು ೧ ಲೋಟ, ಕಲ್ಲು ಸಕ್ಕರೆ ರುಚಿಗೆ.

ಮಾಡುವ ವಿಧಾನ: ಬಿಸಿ ಹಾಲಿಗೆ ಅರಿಷಿಣ ಮತ್ತು ಕಲ್ಲು ಸಕ್ಕರೆಯನ್ನು ಸೇರಿಸಿ ಕುಡಿಯಿರಿ.

ಇದು ಕೆಮ್ಮು ಮತ್ತು ಕಫಕ್ಕೆ ಒಳ್ಳೆಯದು. ** ಕೆಲವರಿಗೆ ಇದರಿಂದ ಕಫ ಬಿಗಿಯುತ್ತೆ.

೩. ಬಿಸಿ ಪಾನಕ:

ಬೇಕಾದ ಪದಾರ್ಥಗಳು: ನಿಂಬೇಹಣ್ಣು ೧, ಸಕ್ಕರೆ ರುಚಿಗೆ, ೧ ಲೋಟ ಬಿಸಿ ನೀರು.

ಮಾಡುವ ವಿಧಾನ: ಬಿಸಿನೀರಿಗೆ ನಿಂಬೇಹಣ್ಣಿನ ರಸ ಮತ್ತು ಸಕ್ಕರೆಯನ್ನ ಬೆರೆಸಿ ಕುಡಿಯಿರಿ.

ಇದು ಗಂಟಲು ನೋವಿದ್ದಾಗ,ಮೂಗು ಸುರಿಯುತ್ತಿದ್ದಾಗ ಕಫ ಕಟ್ಟಿದ್ದಾಗ ಆರಾಮ ನೀಡುತ್ತೆ.

ಇನ್ನ ಬಾಯಿಗೆ ಯೇನು ಸೇರ್ದೆ ಇದ್ದಾಗ ಮಾವಿನ ಕಾಯಿ ಕೂಗಿಲೆ ತಂಬ್ಳಿ ಇದೆ, ಈರುಳ್ಳಿ ತಂಬ್ಳಿ ಇದೆ ಅಷ್ಟೊಂದೆಲ್ಲ ಪಾಕಶಾಸ್ತ್ರ ಜ್ನಾನ ಇಲ್ಲ. ಮುಂದೆ ಆಯಿ ಕೇಳಿ ಬರೀತೀನಿ.

Wednesday, June 27, 2007

ರಾಜಕೀಯ..

ಇದಲ್ಲ ಇಂದ್ರಜಾಲ, ಮಂತ್ರ ಮಾಯ
ಹೆರುವದು ಹಗರಣದ ಮಗುವ,
ಮಾಸುವಮುನ್ನ ಹಳೆಯ ಗಾಯ
ಹರಿಯುವುದು ಹಣದ ಹೊಳೆ,
ಹರಿದಂತೆ ಬಾರಿನಲಿ ಪೇಯ
ಹೆದರಬೇಡ ಗೆಳೆಯ,
ಇದುವೇ ರಾಜಕೀಯ.

Tuesday, June 26, 2007


ಉಪಮಾ ಕಾಳಿದಾಸಸ್ಯ.
ನಿನ್ನೆ ಊಟ ಮಾಡ್ಕೊಂಡು ಹಂಗೇ ಗಾದಿಯ ಮೇಲೆ ಪವಡಿಸ್ಕೊಂಡಿದ್ದೆ. ಕರ್ನಾಟಕ ವಿದ್ಯುತ್ ಮಂಡಳಿಯವರು ಯಾಕೋ ವಿಶ್ರಾಂತಿ ತಗೊಂಡಿದ್ರಿಂದ,ಟಿವಿ ಸುಮ್ಮನೆ ಕುಳಿತಿತ್ತು. ಹಂಗೇ ಹೈಸ್ಕೂಲಲ್ಲಿ ಮೇಷ್ಟ್ರು ಕಾಳಿದಾಸ ಹೇಳಿದ ಶ್ಲೋಕ ನೆನಪಾಯ್ತು,
ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ
ಬಾಲೇ ತವ ಮುಖಾಂಭೋಜೇ ಕಥಮಿಂದೀ ವರದ್ವಯಂ
ಬಹಳ ಸುಂದರವಾದ ಶ್ಲೋಕ ಇದರ ಭಾವಾರ್ಥವನ್ನು ಹೇಳೋದಾದ್ರೆ, ಕಮಲದ ಒಳಗೆ ಕಮಲ ಹುಟ್ಟಿರುವದನ್ನು ಯಾರೂ ಕೇಳೂ ಇಲ್ಲ,ನೋಡೂ ಇಲ್ಲ ಆದ್ರೆ ಕನ್ಯೆ ನಿನ್ನ ಮುಖವೆಂಬ ಕಮಲದಲ್ಲಿ ಇನ್ನೆರಡು ಕಮಲಗಳು ಹೇಗೆ ಅರಳಿವೆ?. ಎಷ್ಟು ಸುಂದರವಾಗಿದೆ ಅಲ್ವಾ? ಕಾಳಿದಾಸ ನಿಜವಾಗಿಯೂ ಆ ಶಾರದಾಂಬೆಯ ಪುತ್ರನೇ
ಇದರ ಹಿಂದಿನ ಕಥೆ ನನಗೆ ತಿಳಿದಷ್ಟು ಹೇಳೋದಾದ್ರೆ, ಭೋಜರಾಜನ ಆಸ್ಥಾನ ವಿದ್ವಾಂಸರುಗಳ ಕಾಶಿಯಾಗಿತ್ತು. ಅಲ್ಲಿ ಸಾಹಿತ್ಯ ಪ್ರಪಂಚದ ಅಥಿರಥ ಮಹಾರಥಿಗಳಿದ್ರು. ಒಮ್ಮೆ ಒಬ್ಬ ವಿದ್ವಾಂಸ ಬಂದು ಸವಾಲು ಹಾಕಿದ, ’ಕಮಲೇ ಕಮಲೋತ್ಪತ್ತಿಃ ಶ್ರೂಯತೇ ನತು ದೃಶ್ಯತೇ’ ಇದರ ದ್ವಿತೀಯ ಚರಣವನ್ನ ಪೂರ್ತಿ ಮಾಡಿ.ಇದನ್ನ ಪೂರ್ತಿ ಮಾಡಿದ್ರೆ ನಾನು ಅವರ ದಾಸ ಆಗ್ತೀನಿ ಇಲ್ಲ ಅಂದ್ರೆ ಆಸ್ಥಾನದಲ್ಲಿರುವ ಎಲ್ಲ ವಿದ್ವಾಂಸರೂ ಅವನಿಗೆ ಶರಣಾಗ್ಬೇಕು ಮತ್ತು ರಾಜ್ಯದಲ್ಲಿ ಅರ್ಧ ಭಾಗ ಕೊಡ್ಬೇಕು ಅಂತ ಸವಾಲು ಹಾಕಿದ. ಆಸ್ಥಾನ ವಿದ್ವಾಂಸರೆಲ್ಲ ಮೂಕವಿಸ್ಮಿತರಾದ್ರು ಯಾರ ಹತ್ರಾನೂ ಇದಕ್ಕೆ ಉತ್ತರ ಇರ್ಲಿಲ್ಲ. ಇದನ್ನ ನೋಡಿ ಭೋಜ ಸಂಪೂರ್ಣವಾಗಿ ವಿಚಲಿತನಾಗಿ ಹೋದ. ಆಸ್ಥಾನದಲ್ಲಿ ಕಾಳಿದಾಸನ ಅನುಪಸ್ಥಿತಿ ಎದ್ದು ಕಾಣ್ತಾ ಇತ್ತು. ಭೋಜ ಕಾಳಿದಾಸನ ನಡುವೆ ಆದ ಕೆಲವು ತಪ್ಪು ಕಲ್ಪನೆಗಳಿಂದ ಕಾಳಿದಾಸನನ್ನ ದೇಶದ ಹೊರಗಟ್ಟಿದ್ದ. ಸಮಸ್ಯೆಯ ಗಂಭೀರತೆಯನ್ನು ನೋಡಿ ಭೋಜ ಡಂಗುರ ಸಾರಿಸ್ದ. ಯಾರು ಸಮಸ್ಯೆನಾ ಪರಿಹರಿಸ್ತಾರೋ ಅವರಿಗೆ ಅರ್ಧ ರಾಜ್ಯ ಕೊಡೋದಾಗಿ. ಇದನ್ನ ಕೇಳಿದ ಕಾಳಿದಾಸನಿಗೆ ಆಶ್ರಯ ಕೊಟ್ಟಿದ್ದ ವೇಶ್ಯೆಯೊಬ್ಬಳು ಕಾಳಿದಾಸನ ಹತ್ತಿರ ಈ ಸಮಸ್ಯೆಯನ್ನ ಪೂರ್ಣಗೊಳಿಸ್ತಾಳೆ.ಅದನ್ನ ಓದಿದಾಗ ಭೋಜನಿಗೆ ಇದು ಕಾಳಿದಾಸನೇ ಬರೆದ ವಾಕ್ಯ ಎಂದು ಅರ್ಥ ಆಗುತ್ತೆ ಮತ್ತು ಅವರ ಪುನರ್ಮಿಲನ ಆಗುತ್ತೆ.
ಈ ಶ್ಲೋಕವನ್ನ ಸೂಕ್ಷ್ಮವಾಗಿ ಗಮನಿಸ್ದ್ರೆ ’ಮುಖಾಂಭೋಜೇ’ಅಲ್ಲಿ ಭೋಜರಾಜ ಕಾಣ್ತಾನೆ. ಎಷ್ಟು ಸುಂದರವಾಗಿ ಪೋಣಿಸಿದ ವಾಕ್ಯ ಅಲ್ವಾ. ಅಂತಹ ಸುಂದರ ಶಬ್ದಗಳ ಹಾರವನ್ನು ಸೃಷ್ಟಿಸಿದ ಆ ಕಲಾವಿದನ್ನ ಎಷ್ಟು ಹೊಗಳಿದ್ರೂ ಸಾಲ್ದು ಅಲ್ವಾ?ಕಾಳಿದಾಸನ ಬಗ್ಗೆ ಮಾತಾಡೋಕ್ಕೆ ಹೋದ್ರೆ ಶಬ್ದಗಳೇ ಸಾಲಲ್ಲ. ಅಭಿಜ್ನಾನ ಶಾಕುಂತಲೆಯಲ್ಲಿ ಅವ ಸೃಷ್ಟಿಸಿದ ವಾಕ್ಯಸರಪಳಿಗಳಿಗೆ ಸಮನಾದ್ದು ಯಾವುದೂ ಇಲ್ಲ ಅನ್ಸುತ್ತೆ.ಅದರಲ್ಲಿ ಶಾಕುಂತಲೆ ಋಷ್ಯಾಶ್ರಮವನ್ನು ಬಿಟ್ಟು ಹೋಗುವಾಗ ಬರೆದ ನಾಲ್ಕು ಶ್ಲೋಕಗಳು ಜಗತ್ತಿನ ಅತಿಸುಂದರ ಶ್ಲೋಕ ಅಂತಾರೆ. ಸಂಸ್ಕೃತ ಭಾಷೆ ಇಷ್ಟು ಸುಂದರವಾಗಿ ಕಾಣೋದಕ್ಕೆ ಬಹುಶಃ ಇಂಥ ಮಹನೀಯರು ಬರೆದ ನುಡಿಮುತ್ತುಗಳೇ ಕಾರಣ ಅನ್ಸುತ್ತೆ.
ಇದೆಲ್ಲಾ ಆಲೋಚನೆ ಮಾಡ್ತಾ ಇರ್ಬೇಕಾದ್ರೆ ಕರಂಟು ಬಂತು. ಉಷೆ ಟಿವಿ ಯಲ್ಲಿ ನಮ್ಮ ಅಣ್ಣ ದರ್ಶನ್ ಅವ್ರು ರಕ್ಷಿತಾ ಅವ್ರಿಗೆ ’ತಬಲ ತಬಲ ತಬಲ ನನ್ನ ಮುದ್ದಿನ ತಬಲ...’ ಅಂತಾ ಹಾಡು ಹಾಡ್ತಾ ಇದ್ರು. ತಬಲ ಬದ್ಲು ಆನೆ ಅಂತಾ ಅಂದಿದ್ರೆ ಉಪಮಾನ ಸರಿಯಾಗಿ ಆಗ್ತಾ ಇತ್ತೋ ಏನೊ. ನಮ್ಮ ಕನ್ನಡ ಚಲನಚಿತ್ರ ಸಾಹಿತಿಗಳ ಉಪಮಾನ ಪರಾಕ್ರಮಕ್ಕೆ ಸುಸ್ತಾಗಿ ಮುಸ್ಕಾ ಎಳ್ಕೊಂಡೆ...

Friday, June 22, 2007



ಅನ್ನ ಪರಬ್ರಹ್ಮ.....

ಇವೊತ್ತು ಬಹಳ ದಿನಗಳ ನಂತರ ನಮ್ಮ ಕ್ಯಾಂಟೀನ್ ಅಲ್ಲಿ ಊಟ ಮಾಡೋಕ್ಕೆ ಹೋಗಿದೆ (ವರುಣನ ಕೃಪೆಯಿಂದ). ನಮ್ಮ ಅಲ್ಲಿ ಊಟ ಸರಿ ಇರಲಿಲ್ಲ ಅವನಿಗೆ ಹಿಡಿ ಶಾಪ ಹಾಕ್ತಾ ಅರ್ಧ ಊಟ ಮಾಡ್ಬಿಟ್ಟು ಇನ್ನರ್ಧನ ಹಂಗೆ ಎಸೆದ್ಬಿಟ್ಟು ಬಂದೆ.ಬಂದು ಹಂಗೇ ಕೂತು ಮೇಲ್ ನೋಡ್ತಾ ಇದ್ದಾಗ, ಈ ಚಿತ್ರ ಕಾಣಿಸ್ತು. ಒಂದೇ ಸಾರಿ ಯೇನೋ ಒಂಥರಾ ಪಾಪ ಭಾವನೆ ಬರೊಕ್ಕೆ ಶುರು ಆಯ್ತು.ಇದು ನಿಜವಾಗ್ಲೂ ವಿಚಾರ ಮಾಡೊಂತ ವಿಷಯ ಅಲ್ವಾ?? ನಾವು ದಿನಾ ಯೆಷ್ಟು ತಿನ್ನೋ ಪದಾರ್ಥಗಳನ್ನ ಎಸೀತೀವಿ, ಯಾವತ್ತಾದ್ರೂ ಇಂಥವರ ಬಗ್ಗೆ ಆಲೋಚನೆ ಮಾಡಿದೀವಾ?? ಇವ್ರು ನಮ್ಮ ಸುತ್ತ ಮುತ್ತಾನೇ ಇರ್ತಾರೆ ಆದ್ರು ನಾವು ಗಮನಿಸೋಲ್ಲ ಲೊಕದ ಕಷ್ಟ ಎಲ್ಲಾ ನಮಗೆ ಯಾಕೆ?? ನಾವು ಎ.ಸಿ ರೂಮಲ್ಲಿ ಚೆನ್ನಾಗಿದ್ರೆ ಆಯ್ತು ಅಲ್ವಾ??
ನಮ್ಮಲ್ಲಿ "ಅನ್ನಂ ಪರಬ್ರಹ್ಮಂ" ಅಂತಾರೆ ಅದು ಇದ್ರೇನೆ ನಮ್ಮ ಜೀವನ ಅಲ್ವಾ?? ಯೆಲ್ಲಾರು ಮಾಡುವದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ. ನಾವು ಇದರ ಸಲುವಾಗಿ ಯೆಷ್ಟು ಕಷ್ಟ(?) ಪಡ್ತೇವಲ್ವಾ?? ಮತ್ತೆ ಸಿಕ್ಕಾಗ ಬಿಡೋದು ಯಾಕೆ??? ಇದು ಬಹಳ ಇರುವದು ಐಟಿ ಸಂಸ್ಥೆಗಳಲ್ಲಿ. ಊಟ ಚೆನ್ನಾಗಿ ಇರೋಲ್ಲ ಅದ್ಕೆ ಹಾಕ್ಕೊಂಡಿದ್ದೆಲ್ಲಾ ತೊಟ್ಟಿ ಪಾಲು. ಬಹಳ ಜವಾಬ್ದಾರಿತವಾಗಿ ಹೇಳೋದಾದ್ರೆ ನಾವು ಯೆಷ್ಟು ಬೇಕೋ ಅಷ್ಟೇ ಹಾಕ್ಕೊಂಡ್ರೆ ಒಳ್ಳೇದು. ಆದ್ರೆ ಯಾರು ಆ ಭೋಜನ ಮಂದಿರ ನಡೆಸ್ತಾ ಇದಾನೋ ಅವನ್ದು ಕೆಲವು ಜವಾಬ್ದಾರಿ ಇರುತ್ತೆ.ನಮಗೆ ಮೃಷ್ಟಾನ್ನ ಬೇಡಾ ಸ್ವಾಮಿ, ರುಚಿಯಾಗಿರೋ ಅನ್ನ ಸಾಂಬಾರು ಕೊಡಿ ಸಾಕು. ಅದಕ್ಕೆ ಅವನ ಉತ್ತರ ’ಸಾರ್ ಒಂದೇ ಸಾರಿ ೪೦೦೦ ಊಟ ಮಾಡ್ಬೇಕು ಅಂದಾಗ ರುಚಿ ಬರಲ್ಲಾ!!!’ ಮಾಡಕ್ಕಾಗಲ್ಲಾ ಅಂದ್ರೆ ಯೇನಕ್ಕೆ ತಗೋತೀಯಾ?? ಅನ್ನೋ ಪ್ರಶ್ನೆಗೆ ಅವನ ಹತ್ತಿರ ಉತ್ರ ಇಲ್ಲ। ಇದಕ್ಕೆ ನಮ್ಮ ಕಂಪನಿಗಳೂ ಯೇನು ಹೇಳಲ್ಲ.ನಾವಂತೂ ಬಿಡಿ ಸಭ್ಯಸ್ತರು ಅವನ್ನ ಕೇಳಿದ್ರೆ ನಮ್ಮ ಮರ್ಯಾದೆ ಪ್ರಶ್ನೆ ಯೇನು ಅಲ್ವಾ???
ಅವೆಲ್ಲ ಆಗೊ ಕೆಲ್ಸ ಅಲ್ಲ ಬಿಡಿ, ಅದಕ್ಕೆ ಪ್ರೊಡಕ್ಷನ್ ಕಂಪನಿಗಳೇ ಬೇಕು. ಕನಿಷ್ಠ ನಾವು ಮಾಡೊಕ್ಕೆ ಆಗೋದು ದಯವಿಟ್ಟು ನಿಮ್ಮ ತಟ್ಟೆಯಲ್ಲಿ ಹಾಕಿದ್ದನ್ನ ತಿನ್ನಿ, ಅದು ಚೆನ್ನಾಗಿ ಇರ್ಲಿ ಇಲ್ದೆ ಇರ್ಲಿ ದಯವಿಟ್ಟು ಎಸೀಬೇಡಿ. ನೀವು ದಾರಿಯಲ್ಲಿ ಹೋಗ್ತಾ ಇರೋವಾಗ ಯಾವ್ದಾದ್ರು ಚಿಕ್ಕ ಮಗು ಭಿಕ್ಷೆ ಹಾಕೋ ಬದ್ಲು ಸ್ವಲ್ಪ ಕಷ್ಟ ತಗೊಂಡು ಪಕ್ಕದಲ್ಲಿರೋ ಅಂಗಡಿ ಇಂದ ಯೇನಾರ ತಿನ್ನೋಕೆ ಕೊಡ್ಸಿ. ನೀವು ನೀಡಿದ ಹಣ ಆ ಮಗುಗೆ ಸಿಗುತ್ತೋ ಇಲ್ವೋ ಗೊತ್ತಿಲ್ಲಾ... ಕೊನೆಯದಾಗಿ ನಿಮ್ಮ ಮನೆಯಲ್ಲಿ ಯಾವ್ದೇ ಕರ್ಯಕ್ರಮ ಇದ್ದು ಊಟ ಹೆಚ್ಚಾಗಿದ್ರೆ ದಯವಿಟ್ಟು 1098-child helpline ಗೆ ಕರೆ ಮಾಡಿ ಅದು ಯಾವ್ದೋ ಹಸಿದ ಮಗುವಿನ ಹೊಟ್ಟೆಯನ್ನ ತುಂಬ್ಸುತ್ತೆ.ನಮ್ಮ ಕಡೆಯಿಂದ ಇಷ್ಟನ್ನಾದ್ರೂ ಮಾಡ್ಬಹುದಲ್ಲಾ??

Thursday, June 21, 2007

ಪ್ರಜಾಪಭುತ್ವ

ಜನರಿಂದ ಜನರಿಗಾಗಿ
ಜನರದ್ದೇ ಈ ಸರಕಾರ,
ಇದಕಿಲ್ಲ ಕಿವಿ ಕೇಳಲು
ಜನರ ಹಾಹಾಕಾರ..

ಹರಿಯುತಿಹುದು ಬಡವರ
ಜೇಬಿಂದ ನೋಟು,
ತುಂಬುತಿಹುದು ರಾಜಕಾರಣಿಗಳ
ಬೀರುವಿನ ಸ್ಲಾಟು..

ರೈತನಿಗೆ ಹೊಟ್ಟೆಗೆ
ಹಿಟ್ಟಿಲ್ಲ್ದದಿರೂ ಸರಿಯೇ,
ವಿದೇಶೀ ಕಾರಿಲ್ಲದ
ಮಂತ್ರಿಪುತ್ರನ ನಾನರಿಯೆ..

ಅರ್ಧ ಜನಕಿಲ್ಲ ಇಲ್ಲಿ
ರೋಝಿ ರೋಟಿ,
ಆದರೆ ಪ್ರತಿ ಶಾಸಕನ ಹತ್ತಿರ
ಕನಿಷ್ಠ ೫೦ ಕೋಟಿ...

ಈ ಕ್ಷೇತ್ರದಿ ಮುದುಕರದೇ
ದರಬಾರು,
ಪ್ರತಿಯೊಬ್ಬನ ಹೆಸರಲ್ಲೂ
ಗಲ್ಲಿ ಗಲ್ಲಿಯಲೊಂದು ಬಾರು..

ರೈತ ಸಾಲ ತೀರಿಸದೇ
ಸತ್ತರೂ ಸೈ,
ಈ ರಾಜಕಾರಣಿಯದು
ಎಮ್ಮೆಯ ಮೈ...

ಐದು ವರ್ಷಕ್ಕೆ ಬದಲಾಗುವದು
ರಕ್ತಹೀರುವ ಪಾಳಿ,
ಸದೆಬಡಿಯಲಾರೆವೆ ಇವರ
ಹೊಮ್ಮಿಸಿ ಬದಲಾವಣೆಯ ಗಾಳಿ...

ಹುಹ್!!!! ಎಲ್ಲ ನೋಡಿ ಸುಮ್ಮನಿರುವದೇ
ನಮ್ಮ ತತ್ವ,
ಇದೇ ಸ್ವಾಮಿ ನಮ್ಮ್ರರ್ಥದಲ್ಲಿ
ಪ್ರಜಾಪ್ರಭುತ್ವ.